ಏಕಂ ಸತ್, ವಿಪ್ರಾ ಬಹುಧಾ ವದಂತಿ

ದೇವರೊಬ್ಬನೇ ನಾಮ ಹಲವು

एकं सत् विप्राः बहुधा वदन्ति (ಏಕಂ ಸತ್, ವಿಪ್ರಾ ಬಹುಧಾ ವದಂತಿ)

ವೇದಾಂತವಾದ ಉಪನಿಷತ್ತುಗಳಲ್ಲಿ ಮತ್ತೆ ಮತ್ತೆ ಉಲ್ಲೇಖವಾಗಿರುವ ಸೂತ್ರವಿದು. ಸಾಮಾನ್ಯವಾಗಿ ಇದರ ಅರ್ಥ “ಸತ್ಯವೊಂದೇ, ಆದರೆ ತಿಳಿದವರು ಅದನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ”, ಅಥವಾ “ದೇವರು ಒಬ್ಬನೇ, ನಾಮ ಹಲವು” ಎಂಬುದು.

ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ, “ಅಸ್ತಿತ್ವದಲ್ಲಿರುವಂತಹ ಪರಮ ಸತ್ಯ ಒಂದೇ, ಆದರೆ ಆ ಸತ್ಯವನ್ನು ಋಷಿಮುನಿಗಳು ಬಹುವಿಧ ಹೆಸರುಗಳಿಂದ ಸಂಬೋಧಿಸಿದರು” ಎನ್ನುವುದು ಭಾರತ ದೇಶದ ಸನಾತನ ಧರ್ಮ ಹಾಗೂ ವಿವಿಧ ಸಂಪ್ರದಾಯಗಳ ಮೂಲವನ್ನೇ ಪ್ರತಿಪಾದಿಸುತ್ತದೆ. ನಮ್ಮಲ್ಲಿರುವ ಬಹುವಿಧ ಸಂಪ್ರದಾಯಗಳು (ಅದ್ವೈತ, ದ್ವೈತ, ಶೈವ, ವೈಷ್ಣವ, ಶಾಕ್ತ, ಮುಂತಾದವು), ಹಾಗೂ ಹಲವಾರು ದೇವತೆಗಳ ಆರಾಧನೆ (ವಿಷ್ಣು, ಶಿವ, ಗಣೇಶ, ದುರ್ಗಾ, ಹನುಮಾನ್, ಸುಬ್ರಹ್ಮಣ್ಯ) ಮೇಲ್ನೋಟಕ್ಕೆ ಬೇರೆ ಬೇರೆ ಸಿದ್ಧಾಂತಗಳಂತೆ ಕಂಡರೂ ಸಹಾ ಅವೆಲ್ಲವೂ ಪ್ರತಿಪಾದಿಸುವುದು ವೇದಾಂತದಲ್ಲಿ ಹೇಳಿದ ಹಾಗೆ ಪರಮ ಸತ್ಯ (ದೇವರು) ಒಂದೇ ಎಂದು.

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ।
ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ॥

ಈ ಶ್ಲೋಕದ ಅರ್ಥ ಕೂಡಾ “ಹೇಗೆ ಆಕಾಶದಿಂದ ಬೀಳುವ ಮಳೆಹನಿಗಳು ಕಡೆಗೆ ತಲುಪುವುದು ಸಾಗರವನ್ನೇ, ಹಾಗೇ ಯಾವ ದೇವರಿಗೆ ನಮಸ್ಕಾರ ಮಾಡಿದರೂ ಸಹಾ ಆ ನಮನ ತಲುಪುವುದು ಕೇಶವನನ್ನೇ” ಎಂದಾಗಿ ದೇವರು ಒಬ್ಬನೇ, ನಾಮ ಹಲವು ಎನ್ನುವ ಸಂದೇಶವನ್ನೇ ಕೊಡುವುದು. ಸಾಮಾನ್ಯವಾಗಿ ಯಾವುದೇ ಸನಾತನ ಧರ್ಮದ ಸಂಪ್ರದಾಯದ ಪೂಜೆಯಿರಲಿ, ಪೂಜೆಯ ಅಂತ್ಯದಲ್ಲಿ ಈ ಶ್ಲೋಕವನ್ನೇ ಹೇಳಿ ನಮಸ್ಕಾರ ಮಾಡುವುದು

ಋಗ್ವೇದದಲ್ಲಿ “ಏಕಂ ಸತ್, ವಿಪ್ರಾ ಬಹುಧಾ ವದಂತಿ” ಎಂದು ಮೊದಲು ಉಲ್ಲೇಖವಾಗಿದ್ದು ಈ ಮೊದಲನೇ ಮಂಡಲದ ೧೬೪ನೇ ಸೂಕ್ತದ ೪೬ನೇ ಮಂತ್ರದಲ್ಲಿ:

इन्द्रं मित्रं वरुणमग्निमाहुरथो स दिव्यो सुपर्णो गरुत्मान् ।
एकं सद्विप्राः बहुधा वदन्ति अग्निं यमं मातरिश्वानमाहुः ॥ (ऋग्वेद् १।१६४।४६)

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ಸ ದಿವ್ಯೋ ಸುಪರ್ಣೋ ಗರುತ್ಮಾನ್ ।
ಏಕಂ ಸದ್ವಿಪ್ರಾ ಬಹುಧಾ ವದಂತಿ ಅಗ್ನಿಂ ಯಮಂ ಮಾತರಿಶ್ವಾನಮಾಹುಃ ॥ (ಋಗ್ವೇದ ೧।೧೬೪।೪೬)

They call him Indra, Mitra, Varuna, Agni, and he is heavenly nobly-winged Garutman. To what is certainly One, sages give many titles and they call it Agni, Yama, Matarisvan.

ಅವರು ಪರಮ ಸತ್ಯವನ್ನು ಇಂದ್ರ, ಮಿತ್ರ, ವರುಣ, ಅಗ್ನಿ, ದಿವ್ಯ ಗರುತ್ಮಾನ ಎಂದು ಕರೆಯುತ್ತಾರೆ, ಯಾವುದು ನಿಸ್ಸಂಶಯವಾಗಿ ಒಂದೋ ಅದಕ್ಕೆ ಋಷಿಗಳು ಅಗ್ನಿ, ಯಮ, ಮಾತರಿಶ್ವಾನ ಎಂದು ಬಹುವಿಧ ಹೆಸರುಗಳನ್ನು ನೀಡಿದ್ದಾರೆ.

ಸನಾತನ ಧರ್ಮದಲ್ಲಿ ದೇವರು ಒಬ್ಬನೇ ಎಂದು ಹೇಳಿದರೂ ಸಹಾ ದೇವರನ್ನು ಬೇರೆ ಬೇರೆ ರೀತಿಯಲ್ಲಿ (ಯಥಾಶಕ್ತಿ, ಯಥಾಮತಿ) ಪೂಜಿಸುವುದನ್ನು ಗೌರವದಿಂದಲೇ ನೋಡಲಾಗಿದೆ. ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಸಹಾ ಒಂದೇ ರೀತಿಯಲ್ಲಿ ಚಿಂತನೆ ಮಾಡುವುದು ಅಥವಾ ಒಂದೇ ರೀತಿಯಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರಿತ, ಬಹುಷಃ ಸೂಕ್ಷ್ಮ ಮನೋ ವಿಜ್ಞಾನಿಗಳಾಗಿರಬಹುದಾದ, ಋಷಿಮುನಿಗಳು ಸಮಾಜಕ್ಕೆ ಒಂದೇ ಆದ ಪರಮಸತ್ಯವನ್ನು ಅರಿಯಲೂ ಸಹಾ ವೈವಿಧ್ಯತೆಯನ್ನು ಕೊಟ್ಟರು. ಸಾವಿರಾರು ವರ್ಷಗಳ ಹಿಂದೆಯೇ ಇಂತಹ ಪ್ರಗತಿಪರ ಹಾಗೂ ಉದಾರವಾದಿ ಚಿಂತನೆಯ ಸಮಾಜ ಹಾಗೂ ಆಧ್ಯಾತ್ಮಿಕ ನಾಯಕತ್ವ ಭಾರತದಲ್ಲಿ ನೆಲೆಯೂರಿದ್ದು ಈ ವಿಚಾರಗಳಿಂದ ಸ್ಪಷ್ಟ.


Leave a Reply

Your email address will not be published. Required fields are marked *